ಇಬ್ಲೀಸ್
	ಇಸ್ಲಾಂ ಧರ್ಮಕ್ಕೆ ಅನುಗುಣವಾಗಿ ದೇವರ ಪ್ರೀತಿಯ ದೂತನಾಗಿದ್ದು ಅನಂತರ ಅವನ ಕೋಪಕ್ಕೆ ಗುರಿಯಾದವ. ಇವನು ಘೋರ ತಪಸ್ಸು ಮಾಡಿ ದೇವರನ್ನು ಮೆಚ್ಚಿಸಿದ್ದ. ದೇವರು ಈತನ ಸಾಧನೆ ಮೆಚ್ಚಿ ಈತನನ್ನು ಎಲ್ಲ ದೂತರಿಗೂ ನಾಯಕನನ್ನಾಗಿ ಮಾಡಿದ್ದ. ಅಜಾಜೀಲ್ ಎಂದು ಇವನಿಗೆ ನಾಮಕರಣವಾಗಿತ್ತು. ಪ್ರಪಂಚದಲ್ಲಿಯ ಭೂತಗಳನ್ನು ನಾಶಮಾಡಲು ದೇವರು ಇವನನ್ನು ಕಳಿಸಿದನೆಂದೂ ಪ್ರತೀತಿ. ದೇವರು ಆದಂನನ್ನು ಮಣ್ಣಿನಿಂದಲೂ ಹವ್ವಾಳನ್ನು (ಈವ್) ಪಕ್ಕೆಲುಬಿನಿಂದಲೂ ಸೃಷ್ಟಿಸಿ, ಆದಂನಿಗೆ ಎಲ್ಲರೂ ತಲೆಬಗ್ಗಿಸಿಬೇಕೆಂದು ಆದೇಶ ನೀಡಿದ. ಆದರೆ ಅಜಾಜೀಲ್ ಮಾತ್ರ ದರ್ಪದಿಂದ ಇದನ್ನು ನಿರಾಕರಿಸಿದ. ಸ್ವತಃ ನನ್ನ ಕೈಯಿಂದಲೇ ಸೃಷ್ಟಿಯಾದವನಿಗೆ ನೀನೇಕೆ ತಲೆಬಾಗುತ್ತಿಲ್ಲ ಎಂದು ದೇವರು ಕೇಳಿದಾಗ, ಆದಂ ಮಣ್ಣಿನಿಂದ 

ಸೃಷ್ಟಿಯಾದವನೆಂದೂ ತಾನಾದರೋ ಅಗ್ನಿಪುತ್ರನೆಂದೂ (ಕುರಾನ್-38; 75-79) ಆದ್ದರಿಂದ ತಾನೇ ಶ್ರೇಷ್ಠನೆಂದೂ ಈತ ಉತ್ತರಿಸಿದ. ದೇವರು ಕೋಪಗೊಂಡ ಮಾನವರನ್ನು ಮೋಸಗೊಳಿಸು, ಅವರಿಗೆ ದಾರಿತಪ್ಪಿಸು ಎಂದು ಇವನಿಗೆ ಶಾಪವಿತ್ತು ಸ್ವರ್ಗ ಪ್ರವೇಶಿಸದಂತೆ ಈತನನ್ನು ಪ್ರತಿಬಂಧಿಸಿದ. ಆದರೆ ಇಬ್ಲೀಸ್ ಜಗ್ಗಲಿಲ್ಲ ನವಿಲೊಂದರ ಸಹಾಯದಿಂದ ನೇರ ಸ್ವರ್ಗದ ಸಮೀಪಕ್ಕೆ ಬಂದ; ಅನಂತರ ಹಾವಿನ ಬಾಯೊಳಗೆ ಕುಳಿತು ಸ್ವರ್ಗ ಪ್ರವೇಶಿಸಿದ. ಆದಂ ಮತ್ತು ಹವ್ವಾಗಳು ಗೋಧಿ ಗಿಡದ ಸಮೀಪ ಹೋಗಕೂಡದೆಂಬುದೂ ಗೋದಿಯನ್ನು ತಿನ್ನಕೂಡದೆಂಬುದೂ ದೇವರ ವಿಧಿಯಾಗಿತ್ತು. ಆದಂನಿಂದ ಗೋದಿ ತಿನ್ನಿಸಲು ಇಬ್ಲೀಸ್ ಪ್ರಯತ್ನಿಸಿ ವಿಫಲನಾದ. ಆದರೆ ಈತನ ಯುಕ್ತಿ ಹವ್ವಾಳ ವಿಚಾರದಲ್ಲಿ ಫಲಿಸಿತು. ಅವಳಿಗೆ ಈತ ಗೋದಿ ತಿನ್ನಿಸಿದ. ಹವ್ವಾ ಆದಂನಿಗೂ ತಿನ್ನಿಸಿದಳು. ಆದಂ ಮತ್ತು ಹವ್ವಾ ದೇವರ ಆಜ್ಞೆ ಉಲ್ಲಂಘಿಸಿದುದರಿಂದ ಅವರಿಬ್ಬರ ಸ್ವರ್ಗದ ಉಡುಪುಗಳು ಕೆಳಗೆ ಬಿದ್ದು ಹೋದುವು. ತಕ್ಷಣ ಅವರಿಬ್ಬರೂ ಅಂಜೂರದ ಮತ್ತು ಧೂಪದ ಗಿಡಗಳ ಎಲೆಗಳನ್ನು ತಮ್ಮ ಬೆತ್ತಲೆ ಮೈಗೆ ಸುತ್ತಿಕೊಂಡರು. ತನ್ನ ಆಜ್ಞೆ ಉಲ್ಲಂಘಿಸಿ ಇಬ್ಲೀಸನ ಮಾತು ಕೇಳಿದ್ದರಿಂದ ದೇವರು ಇವರಿಬ್ಬರನ್ನೂ ಭೂಮಿಗೆ ತಳ್ಳಿದ. ಅಂದಿನಿಂದಲೂ ಇಬ್ಲೀಸ್ ಮಾನವನ ಶತ್ರು. ಮಾನವರನ್ನು ಕೆಟ್ಟ ಕೆಲಸಗಳಿಗೆ ಪ್ರೇರೇಪಿಸುವುದೂ ಅವರು ದೇವರ ಪ್ರಾರ್ಥನೆ ಮಾಡದಂತೆ ಅಡ್ಡಿ ಆತಂಕಗಳನ್ನೊಡ್ಡುವುದೂ ಇವನ ಕೆಲಸ.

	
ಜ್ಯೂವಿಫ ಮತ್ತು ಕ್ರೈಸ್ತರ ಸೈತಾನನಿಗೆ ಈತ ಸಮಾನ. ದೇವರ ವಿರುದ್ಧ ಬಂಡೆದ್ದವನೆಂದು ಹನ್ನೊಂದು ಬಾರಿ ಕುರಾನಿನಲ್ಲಿ ಇವನನ್ನು ಹೆಸರಿಸಲಾಗಿದೆ.								
	(ಎಸ್.ಎ.ಟಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ